ಮುದ್ಗಲ
ಒಬ್ಬ ಮಹರ್ಷಿ, ಭಮ್ರ್ಯಾಶ್ವನ ಮಗ. ಈತನಿಗೆ ವ್ರೀಹಿದ್ರೋಣ ಎಂಬುದು ನಾಮಾಂತರ. ದಿವೋದಾಸ ಮತ್ತು ಅಹಲ್ಯೆ ಈತನ ಮಕ್ಕಳು. ಶಿಲೋಂಛ ವೃತ್ತಿಯಿಂದ (ಹೊಲಗದ್ದೆಗಳಲ್ಲಿ ರೈತರು ಕಾಳನ್ನು ಕೊಂಡೊಯ್ದಮೇಲೆ ಬಿದ್ದಿರುವ ಕಾಳನ್ನಾಯ್ದು (ಅಂಕಲು) ಅದರಿಂದ ಜೀವಿಸುವುದು) ಜೀವಿಸುತ್ತಿದ್ದ. ವ್ರತನಿಷ್ಠವಾಗಿ ಧರ್ಮನಿಷ್ಠನಾಗಿ, ಕಪೋತವ್ರತಿಯಾಗಿ ಇಷ್ಟಿಗಳನ್ನೂ ಅತಿಥಿ ಸತ್ಕಾರ್ಯಗಳನ್ನು ಶ್ರದ್ಧೆಯಿಂದ ಮಾಡುತ್ತಿದ್ದ. ದೂರ್ವಾಸಮನಿ ಮುದ್ಗಲನ ಮನೋವೃತ್ತಿ ಪರೀಕ್ಷಿಸಲು ಆರು ಸಲ ಬಂದು ಪೀಡಿಸಿದ. ಒಂದೇ ತೆರನಾದ ಸತ್ಕಾರ ಪಡೆದು ಸಂತುಷ್ಟನಾದ. ಈ ಕಪೋತ ವ್ರತಿಯನ್ನು ಸ್ವರ್ಗಕ್ಕೆ ಕರೆದೊಯ್ಯಲು ದೇವತೆಗಳು ಬಂದಾಗ ಪುಣ್ಯ ವಿಶೇಷವಿರುವ ತನಕ ಮಾತ್ರ. ಅಲ್ಲಿರಬಹುದು ಎಂದ ದೇವತೆಗಳ ಮಾತಿಗೆ ಸ್ವರ್ಗ ಸುಖವನ್ನು ತಿರಸ್ಕರಿಸಿದ. ನಾನು ಶಾಶ್ವತ ಸುಖಕ್ಕಾಗಿ ಪಾಡುಪಡುತ್ತಿದ್ದೇನೆ ಎಂದು ಹೇಳಿ ವಿಮಾನವನ್ನು ಹಿಂದಕ್ಕೆ ಕಳಿಸಿದ. ಮುದ್ಗಲ ಮಹಾವಿಷ್ಣುವಿನ ಪ್ರೀತ್ಯರ್ಥ ಯಾಗಮಾಡಿದ. ಭಗವಂತ ಪ್ರತ್ಯಕ್ಷನಾಗಿ ಏನು ವರಬೇಕೆಂದು ಕೇಳಿದಾಗ ಕಾಮಧೇನುವಿನ ಕ್ಷೀರದಿಂದ ಹೋಮ ಮಾಡುವ ಇಚ್ಛೆ ಪ್ರಕಟಿಸಿದ. ಮಹಾವಿಷ್ಣು ದೇವಶಿಲ್ಪಿಯ ಮೂಲಕ ಅಂದವಾದ ಕೊಳವನ್ನು ನಿರ್ಮಾಣ ಮಾಡಿಸಿ, ಕಾಮಧೇನುವನ್ನು ಕರೆದು ಮುದ್ಗಲನ ಇಚ್ಛೆಯನ್ನು ನೆರವೇರಿಸುವಂತೆ ತಿಳಿಸಿದ. ಆ ಕೋಳ ರಾಮೇಶ್ವರದ ಬಳಿ ಇರುವ ಕ್ಷೀರತೀರ್ಥವೆಂದು ಪ್ರತೀತಿ.
(ಆರ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ